ಟ್ಯಾಂಕ್
ಲೋಹದ ಹಾಳೆಯಿಂದ ಪೂರ್ಣವಾಗಿ ಹೊದೆಸಲ್ಪಟ್ಟಿರುವ ಸೇನಾವಾಹನ. ಇದರಲ್ಲಿ ಭಾರವಾದ ಫಿರಂಗಿಯೂ (ಗನ್) ಒಂದು ಇಲ್ಲವೇ ಎರಡು ಯಂತ್ರಚಾಲಿತ ಬಂದೂಕುಗಳೂ (ಮಷೀನ್ ಗನ್ಸ್) ಸಜ್ಜಾಗಿರುವುವು. ಜಾಡುಪಟ್ಟಿ ಸಹಿತವಾದ ಚಕ್ರಗಳ ಮೇಲೆ ಟ್ಯಾಂಕನ್ನು ಅಳವಡಿಸಿರುವುದರಿಂದ ಇದು ಹರಕು ದೊರಗು ನೆಲದ ಮೇಲೆ ಸಲೀಸಾಗಿ ಸಾಗಬಲ್ಲದು. ಇದಕ್ಕೆ ಹೊದೆಸಿದ ಲೋಹಕವಚವು (ಆರ್ಮರ್) ಟ್ಯಾಂಕಿನ ಕಾರ್ಯಪಡೆಗೆ (ಕ್ರೂ) ಲಘು ಅಗ್ನ್ಯಸ್ರಗಳ (ಸ್ಮಾಲ್ ಆರಮ್ಸ್) ತಾಡನೆಯಿಂದಲೂ ಸಿಡಿ ಗುಂಡುಗಳ (ಷೆಲ್ಸ್) ಚೆಕ್ಕೆಗಳಿಂದಲೂ ರಕ್ಷಣೆಯನ್ನು ಒದಗಿಸುತ್ತದೆ.

	ಐತಿಹಾಸಿಕ ಸಮೀಕ್ಷೆ: ಉಗಿ ಎಂಜಿನ್ನಿನ ಉಪಜ್ಞೆ (ಇನ್‍ವೆನ್ಷನ್) ಆದಂದಿನಿಂದಲೂ ರೈಲು ಬಂಡಿಗಳಿಗೆ ಲೋಹ ಕವಚವನ್ನು ಹೊದೆಸಿ ಫಿರಂಗಿಗಳನ್ನು ಹೂಡಿ ರಣರಂಗಕ್ಕೆ ಒಯ್ಯುವ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯತೊಡಗಿದವು. 1886ರಲ್ಲಿ ಗಾಟ್ಲೆಬ್ ಡೇಮ್ಲರ್ ಎಂಬಾತ ಉನ್ನತ ವೇಗದ ಅಂತರ್ದಹನ ಎಂಜಿನ್ನಿನ ಏಕಸ್ವವನ್ನು (ಪೇಟೆಂಟ್) ಪಡೆದ. ಮೊದಲ ಸ್ವಯಂಚಾಲಿತ ಯುದ್ಧವಾಹನದ ನಿರ್ಮಾಣಕ್ಕೆ ಇದು ನಾಂದಿ. ಬ್ರಿಟನ್ನಿನ ಎಫ್. ಆರ್ ಸೆಮಿನ್ಸ್ ಇಂಥ ಒಂದು ಮೋಟರ್ (ಅಂದರೆ ಸ್ವಯಂಚಲಿ) ವಾಹನವನ್ನು ಯುದ್ಧೋದ್ದೇಶಕ್ಕಾಗಿ ನಿರ್ಮಿಸಿದ (1899) ಮೊದಲಿಗ. ಈತನ ರಚನೆ ಲೋಹ ಕವಚದ ರಕ್ಷಣೆಯಿಂದ ಕೂಡಿದ ನಾಗಾಲಿಗಳ ಮೇಲೆ ಓಡುವ ಹಗುರವಾದ ಒಂದು ಮೋಟರ್ ಸೈಕಲ್. ಇದರಲ್ಲಿ ಒಂದು ಮ್ಯಾಕ್ಸಿಮ್ ಯಂತ್ರಚಾಲಿತ ಬಂದೂಕನ್ನು ಸಜ್ಜುಗೊಳಿಸಲಾಗಿತ್ತು. ರಣರಂಗದಲ್ಲಿ ಟ್ಯಾಂಕನ್ನು ಮೊದಲಬಾರಿ ಹೂಡಿದವರು ಇಟಾಲಿಯನ್ನರು; ಇಟಲಿ-ತುರ್ಕಿ ಯುದ್ಧದಲ್ಲಿ (1912). ಅದೊಂದು ಫ್ರೆಂಚ್ ನಿರ್ಮಿತ ಕವಚ್ಛಾದಿತ ರೀನೋ ಕಾರು. ಅದರಲ್ಲಿ ಎರಡು-ಪೌಂಡರ್ ಫಿರಂಗಿ ಇತ್ತು.

	ಟ್ಯಾಂಕಿನ ಇತಿಹಾಸದಲ್ಲಿ ನಾವು ಕಾಣುವ ಒಂದು ವಿಚಿತ್ರ ಸಂಗತಿ ಉಂಟು; ನೆಲವಾಹನವಾದ ಇದರ ವಿಚಾರ ತೀವ್ರ ಚಿಂತನೆ ನಡೆಸಿ ಇದರ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿದ್ದು ಕಾಲ್ದಳದ ವಿಭಾಗವಲ್ಲ, ಬದಲು ನೌಕಾಪಡೆಯ ವಿಭಾಗ ! ರಾಯಲ್ ನೌಕಾಬಲಕ್ಕೆ (ಬ್ರಿಟನ್ನಿನ ನೌಕಾಪಡೆಯ ಹೆಸರು) ಆ್ಯಂಟ್‍ವರ್ಪ್ (ಬೆಲ್ಜಿಯಮ್) ರೇವನ್ನು ಕಾಪಾಡುವ ಹೊಣೆಯನ್ನು ವಿಧಿಸಿದ್ದರು. (1914). ರೇವಿನ ತೀರದ ನೆಲಭಾಗವನ್ನು ರಕ್ಷಿಸಲು ಕೆಲವಾದರೂ ಲೋಹ ಫಲಕಾಚ್ಛಾದಿತ ಮೋಟಾರ್ ಕಾರುಗಳು ಬೇಕೆಂಬುದಾಗಿ ನೌಕಾಧಿಕಾರಿಗಳು ಸಲಹೆ ಮಾಡಿದರು. ಇದರ ಅನುಸಾರ ಐವತ್ತು ರೋಲ್ಸ್‍ರಾಯ್ಸ್ ಕಾರುಗಳಿಗೆ ಕಾರ್ಯಪಡೆಯ (ಕ್ರೂ) ರಕ್ಷಣೆಗೋಸ್ಕರ ಕವಚವನ್ನು ತೊಡಿಸಿ ಯಂತ್ರಚಾಲಿತ ಬಂದೂಕುಗಳನ್ನು ಜೋಡಿಸಿ ಸಜ್ಜುಗೊಳಿಸಲಾಯಿತು. ಈ ಯೋಜನೆಯನ್ನು ಸ್ವಾಗತಿಸಿ ಇದನ್ನು ಕಾರ್ಯರೂಪಕ್ಕೆ ಇಳಿಸಲು ಬೇಕಾದ ಅಧಿಕೃತ ಮಂಜೂರಾತಿಯನ್ನು ಒದಗಿಸಿದವರು. ಆ ವೇಳೆ ಅಡ್ಮಿರಲ್ಟಿಯ ಫಸ್ಟ್‍ಲಾರ್ಡ್ ಆಗಿದ್ದ, ವಿನ್ಸ್‍ಟನ್ ಚರ್ಚಿಲ್.

	ನೆಲ ಕಾದಾಟದಲ್ಲಿ ಟ್ಯಾಂಕುಗಳ ಭಾರಿ ಬಳಕೆಯ ಯೋಚನೆ ಹೊಳೆದದ್ದು 1914-16ರ ಮಹಾಯುದ್ಧಾನಂತರವೇ. ಆ ವೇಳೆಗೆ ಮಿತ್ರ ರಾಷ್ಟ್ರಗಳು ಪಶ್ಚಿಮ ರಂಗದಲ್ಲಿನ ಕಂದಕ ಯುದ್ಧದಲ್ಲಿ (ಟ್ರೆಂಚ್ ವಾರ್‍ಫೇರ್) ಜರ್ಮನರ ಯಂತ್ರಚಾಲಿತ ಬಂದೂಕುಗಳಿಂದ ಅಪಾರ ಘಾಸಿಗೊಂಡಿದ್ದವು. ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳ ಸೈನ್ಯ ಸಾಗರವನ್ನೇ ಕಬಳಿಸುತ್ತಿದ್ದ ಈ ಯಂತ್ರಚಾಲಿತ ಬಂದೂಕುಗಳ ಮಾರಣಹೋಮದಿಂದ ರಕ್ಷಣೆ ಪಡೆಯಲು ಏನಾದರೂ ಒಂದು ಹಾದಿಯನ್ನು ಅರಸುವುದು ಅನಿವಾರ್ಯವಾಗಿತ್ತು. ಇದಕ್ಕೆ ಇರುವ ಏಕೈಕ ಪರಿಹಾರ ಟ್ಯಾಂಕ್ ಎಂಬುದಾಗಿ ಬ್ರಿಟಿಷ್ ಜನರಲ್ ಜೆ.ಎಫ್.ಸಿ.ಫುಲ್ಲರ್ ಸೂಚಿಸಿದ. 1916ರ ಸೋಮ್ ಕದನದಲ್ಲಿ ಕೆಲವು ಟ್ಯಾಂಕುಗಳನ್ನು ಬಳಸಲಾಯಿತು. ಆದರೆ ಅವುಗಳ ಸಂಖ್ಯೆ ಕಡಿಮೆ ಇದ್ದುದರಿಂದ ಪರಿಣಾಮಕಾರಿ ಫಲ ಕಂಡುಬರಲಿಲ್ಲ. ಮುಂದೆ 1917ರ ನವೆಂಬರ್ 20ರಂದು ಆರಂಭವಾದ ಕ್ಯಾಂಬ್ರೇ ಕದನದಲ್ಲಿ 300 ಟ್ಯಾಂಕುಗಳನ್ನು ಯಾವ ಪೂರ್ವದಾಳಿಯೂ ಇಲ್ಲದೆ ನೇರವಾಗಿ ಕಾಳಗದಲ್ಲಿ ಹೂಡಿದರು. ಇವು ಶತ್ರುವಲಯವನ್ನು ಭೇದಿಸಿ ಎಂಟು ಕಿಲೊಮೀಟರುಗಳ ಆಳದವರೆಗೆ ಒಳನುಗ್ಗಿದವು. ಹೀಗೆ ನೆಲಕಾದಾಟದಲ್ಲಿ ಟ್ಯಾಂಕು ನಿರ್ಣಾಯಕ ಆಯುಧವಾಗಿ ಸ್ಥಾನ ಗಳಿಸಿತು.

	ಈ ವಾಹನದ ಅಧಿಕೃತ ನಾಮಧೇಯ ಆರ್ಮರ್ಡ್ ಫೈಟಿಂಗ್ ವೆಹಿಕಲ್ (ಕವಚಯುಕ್ತ ಯುದ್ಧವಾಹನ) ಎಂದಿದ್ದರೂ ಸಾರ್ವತ್ರಿಕವಾಗಿ ಅಂಗೀಕೃತವಾದ ಹೆಸರು ಮಾತ್ರ ಟ್ಯಾಂಕ್. ಇದು ಬಳಕೆಗೆ ಬಂದದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ 1914ರ ಬ್ರಿಟನ್ನಿನಲ್ಲಿ ಇಂಥ ಒಂದು ವಾಹನದ ತಯಾರಿಸಲು ವಿಚಾರ ರಹಸ್ಯವಾಗಿ ಪ್ರಯೋಗಗಳನ್ನು ಮಾಡುತ್ತಿದ್ದರು. ಆದರೆ ಈ ಗೋಪ್ಯವನ್ನು ಕಾರ್ಮಿಕರಿಂದ ಕಾಯ್ದಿಡುವುದು ಹೇಗೆ? ಅದೇ ವೇಳೆ ಮೆಸಪೊಟೋಮಿಯದ ಮರುಭೂಮಿಗಳಲ್ಲಿ ತುರ್ಕರ ಎದುರು ಹೋರಾಟ ನಡೆಯುತ್ತಿತ್ತು. ಅಲ್ಲಿ ಸೈನಿಕರ ಉಪಯೋಗಕ್ಕಾಗಿ ನೀರನ್ನು ದಾಸ್ತಾನು ಮಾಡಲು ಉಕ್ಕಿನ ಭಾರೀ ತೊಟ್ಟಿಗಳನ್ನು (ಟ್ಯಾಂಕ್ಸ್) ತಯಾರಿಸಬೇಕಾಗಿದೆ. ಆ ಸಂಬಂಧವಾದ ಪ್ರಯೋಗಗಳಿವು ಎಂಬುದಾಗಿ ಸ್ವತಃ ಕಾರ್ಖಾನೆಯಲ್ಲಿಯೇ ಸುದ್ದಿ ಹಬ್ಬಿಸಿ ಇದನ್ನು ಸಾಧಿಸಲಾಗಿತ್ತು. ಹೀಗಾಗಿ ಮುಂದೆ ನಿಜಸಂಗತಿ ಬೆಳಕಿಗೆ ಬಂದಾಗಲೂ ಟ್ಯಾಂಕ್ ಎಂಬ ಹೆಸರೇ ರೂಢಿಯಲ್ಲಿ ಸ್ಥಿರವಾಯಿತು.

ಪ್ರಧಾನ ಘಟಕಗಳು : ಟ್ಯಾಂಕಿನಲ್ಲಿ ಐದು ಪ್ರಧಾನ ಘಟಕಗಳಿವೆ.

	1 ಬುರುಜು (ಟರೆಟ್) : ಟ್ಯಾಂಕಿನ ಅಗ್ರಾರ್ಧ ಭಾಗ. ಫಿರಂಗಿ ಮತ್ತು ಯಂತ್ರಚಾಲಿತ ಬಂದೂಕುಗಳು ಇಲ್ಲಿವೆ. ನಾಯಕನ ಸ್ಥಾನವೂ ಇಲ್ಲೇ. ಬುರುಜು ಪೂರ್ಣ ಸುತ್ತು ತಿರುಗಬಲ್ಲುದು.

2 ಫಿರಂಗಿ : ಟ್ಯಾಂಕಿನ ಮುಖ್ಯ ಆಯುಧ. ಬುರುಜಿನೊಡನೆ ಫಿರಂಗಿ ಕೂಡ 3600 ತಿರುಗಬಲ್ಲದು. ಯಂತ್ರಚಾಲಿತ ಬಂದೂಕುಗಳನ್ನು ಫಿರಂಗಿಯೊಡನೆ ಸಹಾಕ್ಷೀಯವಾಗಿ (ಕೋಆ್ಯಕ್ಸಿಯಲ್) ಸಜ್ಜುಗೊಳಿಸಿದೆ.

3 ಕಂಡಿ ಕದ (ಹ್ಯಾಚ್) : ಬುರುಜಿನ ಮುಚ್ಚಳ. ಇದನ್ನು ತೆರೆಯಬಹುದು ಮತ್ತು ಮುಚ್ಚಬಹುದು. ಕಾರ್ಯಪಡೆಯ ಟ್ಯಾಂಕಿನ ಒಳಕ್ಕೆ ಹೋಗುವುದು ಮತ್ತು ಅಲ್ಲಿಂದ ಹೊರಬರುವುದು ಈ ಕಂಡಿಯ ಮೂಲಕವೇ. ಅಲ್ಲದೇ ನಾಯಕನಿಗೆ ದೃಶ್ಯಾವಲೋಕನ ಮಾಡಲು ಕಂಡಿಕದದ ಉಪಯೋಗ ಉಂಟು.

4 ಒಡಲು (ಹಲ್) : ಟ್ಯಾಂಕಿನ ತಳಾರ್ಧ ಭಾಗ. ಚಾಲಕರ (ಡ್ರೈವರ್ಸ್) ಮತ್ತು ಕಾರ್ಯಪಡೆಯ ಸ್ಥಾನ. ಸಿಡಿಮದ್ದುಗಳ ಉಗ್ರಾಣ ಹಾಗೂ ಚಾಲನ ಯಂತ್ರ ವಿನ್ಯಾಸ (ಡ್ರೈವಿಂಗ್ ಮೆಕ್ಯಾನಿಸಮ್) ಎಲ್ಲವೂ ಇಲ್ಲಿವೆ. ಟ್ಯಾಂಕಿಗೆ ಹೊದೆಸಿದ ಲೋಹ ಕವಚದ ದಪ್ಪ 4-10ಛಿm. ವರೆಗೂ ಇರುವುದು. ಮುಂಭಾಗದಲ್ಲಿ ದಪ್ಪ ಅತಿ ಹೆಚ್ಚು.

5 ಕಾರ್ಯಪಡೆ (ಕ್ರೂ) : ಇದರ ಸಂಖ್ಯೆ ಮೂರರಿಂದ ಐದರವರೆಗೆ ಇರಬಹುದಾದರೂ ಸಾಮಾನ್ಯವಾಗಿ ಮೂವರು ಮಾತ್ರ ಇರುವುದು ವಾಡಿಕೆ : ನಾಯಕ, ಫಿರಂಗಿದಾರ, ಚಾಲಕ.

	ವೈಲಕ್ಷಣ್ಯಗಳು : ಎಡ್ಡತಿಡ್ಡ ನೆಲದ ಮೇಲೆ ಅಗ್ನಿ ಸಾಮಥ್ರ್ಯವನ್ನು ಒಯ್ಯುವುದು. ಅದರೊಂದಿಗೆ ಸ್ವಂತ ದಳಕ್ಕೆ ಶತ್ರುವಿನ ಅಗ್ನಿದಾಳಿ ವಿರುದ್ಧ ಕವಚ ರಕ್ಷಣೆಯನ್ನು (ಆರ್ಮರ್ ಪ್ರೊಟೆಕ್ಷನ್) ಒದಗಿಸುವುದು-ಇವುಗಳ ನಿರ್ವಹಣೆ ಟ್ಯಾಂಕಿನ ಉದ್ದೇಶ. ಅಗ್ನಿಸಾಮಥ್ರ್ಯವನ್ನು ಒದಗಿಸಲು ಇದರಲ್ಲಿ ಒಂದು ಫಿರಂಗಿಯೂ ಒಂದು ಅಥವಾ ಹೆಚ್ಚು ಯಂತ್ರಚಾಲಿತ ಬಂದೂಕುಗಳೂ ಇವೆ. ಹೆಚ್ಚಿನ ಎಲ್ಲ ಟ್ಯಾಂಕುಗಳಲ್ಲಿಯೂ ಫಿರಂಗಿಯು ಕಾಲ್ದಳಕ್ಕೆ ಹ್ರಸ್ವ ಹಾಗೂ ದೀರ್ಘ ವ್ಯಾಪ್ತಿಯ ಬೆಂಬ್ತವನ್ನು (ಷಾರ್ಟ್ ಅಂಡ್ ಲಾಂಗ್ ರೇಂಜ್ ಸಪೊರ್ಟ್) ನೀಡುವುದರ ಜೊತೆಗೆ ಶತ್ರು ಟ್ಯಾಂಕುಗಳನ್ನು ಸಮರನಿರತವಾಗಿ ಇಡಬಲ್ಲದು. ಶತ್ರುಕಾಲ್ದಳ ಮತ್ತು ಇತರ ಲಕ್ಷ್ಯಗಳ (ಟಾರ್ಗೆಟ್ಸ್) ಮೇಲೆ ಯಂತ್ರಚಾಲಿತ ಬಂದೂಕುಗಳು ಮಹಾಗಾತ್ರದ ಹಾಗೂ ಅತಿ ನಿಖರವಾದ ಅಗ್ನಿವರ್ಷವನ್ನೇ ಕಾರಬಲ್ಲವು. ಟ್ಯಾಂಕಿಗೆ ಕ್ಷಿಪ್ರಗತಿಯೂ ಎಡ್ಡತಿಡ್ಡ ನೆಲದ ಮೇಲೆ ಸಮರ್ಥ ಕಾರ್ಯನಿರ್ವಹಣ ಕೌಶಲವೂ ಇರುತ್ತವೆ. ಹೀಗಾಗಿ ಶೀಘ್ರ ದಟ್ಟೈಸಿಕೆ. ಸ್ಥಳ ವೀಕ್ಷಣೆ (ರೆಕನ್ನಾಯ್‍ಸೆನ್ಸ್) ಮತ್ತು ದಳವಿತರಣೆಗಳನ್ನು (ಡಿಪ್ಲಾಯ್‍ಮೆಂಟ್) ಒಡನೆ ಮಾಡಲು ಸಾಧ್ಯವಾಗುತ್ತದೆ. ಚಲನಶೀಲತೆಯ ಈ ಬಂಡವಾಳವನ್ನು ಬಳಸಿಕೊಂಡು ಓರ್ವ ಸಮರ್ಥ ನಾಯಕರ ಕದನದ ಅದೃಷ್ಟವನ್ನೇ ಬದಲಾಯಿಸಬಲ್ಲ ಶತ್ರುವಿನ ಲಘು ಅಗ್ನ್ಯಸ್ತ್ರಗಳಿಂದ ಮತ್ತು ಸ್ವಲ್ಪ ಮಟ್ಟಿಗೆ ಶತ್ರುವಿನ ಸಿಡಿ ಗುಂಡುಗಳಿಂದ ಕೂಡ ಕಾರ್ಯಪಡೆಗೆ ಟ್ಯಾಂಕು ರಕ್ಷಣೆ ನೀಡುವುದರಿಂದ ಇದು ಎದುರಾಳಿ ನೆಲೆಗಳಿಗೇ ನೇರ ನುಗ್ಗಿ ಸ್ವಂತ ಕಾಲ್ದಳಗಳಿಗೆ ನಿಕಟ ಬೆಂಬಲವನ್ನು ಸಹ ಒದಗಿಸಬಲ್ಲದು. ಟ್ಯಾಂಕುಗಳಲ್ಲಿನ ನಿಸ್ತಂತು ಸಂಪರ್ಕ ವಿಧಾನಗಳು ಉತ್ಕøಷ್ಟ ದರ್ಜೆಯವು. ಹೀಗಿದ್ದರೂ ಟ್ಯಾಂಕುಗಳನ್ನು ಉಜ್ಜುಗಿಸುವಲ್ಲಿ ಕೆಲವು ಅಡಚಣೆಗಳಿವೆ. ಮೊದಲನೆಯದಾಗಿ, ಇವು ನೆಲಕ್ಕೆ ತೀವ್ರ ಸಂವೇದಕಗಳಾಗಿವೆ. ಅಂದರೆ, ನೈಸರ್ಗಿಕ ಹಾಗೂ ಕೃತಕ ಅಡಚಣೆಗಳು. ಜವುಗು ನೆಲ, ತುಂಬ ಮರಳಿನಿಂದ ಕೂಡಿರುವ ನೆಲ ಹಾಗೂ ಬಂಡೆ ನೆಲಗಳು ಟ್ಯಾಂಕುಗಳ ಚಲನೆಗೆ ತೀವ್ರಪ್ರತಿಬಂಧಕಗಳು. ಎರಡನೆಯದಾಗಿ, ಕಾರ್ಯಪಡೆ ಒಂದೇ ದಿಶೆಯಲ್ಲಿ ಮಾತ್ರ ನೋಡಬಲ್ಲುದಾದ್ದರಿಂದ ದೃಶ್ಯತೆ ಸೀಮಿತವಾಗಿದೆ. ರಾತ್ರಿ ವೇಳೆಯಂತೂ ಇದು ಶೂನ್ಯವೇ ಆಗುತ್ತದೆ. ಈ ತೊಂದರೆಗಳನ್ನು ನಿವಾರಿಸಲು ಸಾಕಷ್ಟು ಸುಧಾರಣೆಗಳನ್ನು ಮಾಡಲಾಗುತ್ತದೆ. ಮೂರನೆಯದಾಗಿ, ಟ್ಯಾಂಕ್ ವಿರೋಧಿ ಆಯುಧಗಳೂ ಸಿಡಿಗುಂಡುಗಳೂ ಟ್ಯಾಂಕಿನ ಪ್ರಬಲ ಶತ್ರಗಳು, ಆದ್ದರಿಂದ ಭಾರಿ ಸಂಖ್ಯೆಯಲ್ಲಿ ಟ್ಯಾಂಕುಗಳನ್ನು ರಣರಂಗಕ್ಕೆ ಪರಿಣಾಮಕಾರಿಯಾಗಿ ರವಾನಿಸುವ ಮುನ್ನ ಯುಕ್ತ ನಿರೋಧ ಕ್ರಿಯೆಯನ್ನು ಕೈಗೊಂಡಿರಬೇಕು. ನಾಲ್ಕನೆಯದಾಗಿ, ಕಾರ್ಯಪಡೆಯವರು ಬಲು ಬೇಗನೆ ಆಯಾಸಗೊಳ್ಳುವರು. ಐದನೆಯದಾಗಿ, ಟ್ಯಾಂಕುಗಳಿಗೆ ಇಂಧನವನ್ನು ಪೊರೈಸುವುದೂ ಅವನ್ನು ಸನ್ನದ್ಧವಾಗಿ ಇರಿಸುವುದೂ ವಿಶೇಷ ಶ್ರಮ ಹಾಗೂ ವೆಚ್ಚವನ್ನು ಬೇಡುವಂಥ ಕಾರ್ಯಗಳು.

ಸಾಧಾರಣ ಗಾತ್ರದ ಯುದ್ಧ ಟ್ಯಾಂಕಿನ ವಿವರಗಳು
ತೂಕ			 ...	40 ಟನ್ನುಗಳು					
ಉದ್ದ			 ...	6.6 ಮೀಟರುಗಳು
ಅಗಲ			 ...	3.2 ಮೀಟರುಗಳು
ಎತ್ತರ (ಬುರುಜು ಸಮೇತ) ...	2.2 ಮೀಟರುಗಳು
ಫಿರಂಗಿ ವ್ಯಾಸ	ಫಿರಂಗಿ ವ್ಯಾಸ	105 ಮಿಲಿಮೀಟರಗಳು (2,740 ಮೀಟರುಗಳವರೆಗೆ ಹೊಡೆದು ಕೆಡವ	ಬಲ್ಲವು)
ಯಂತ್ರ ಚಾಲಿತ		 ... 	7.62 ಮಿಲಿಮೀಟರುಗಳು
ಬಂದೂಕಿನ ವ್ಯಾಸ
ಎಂಜಿನ್	ಎಂಜಿನ್	ವಾಯುಶೀತಲೀಕೃತ ಬಹ್ವೇಂಧನ 750 ಅಶ್ವ ಸಾಮಥ್ರ್ಯ ಎಂಜಿನ್, ಮಿನಿಟಗೆ 2,200 
		ಪರಿಭ್ರಮಣೆಗಳು
ಕಾರ್ಯಪಡೆ		 ... 	3-4 ಸೈನಿಕರು

	ವಿಶೇಷೀಕೃತ ಟ್ಯಾಂಕುಗಳು : ಯುದ್ಧ ಟ್ಯಾಂಕುಗಳು ಅಲ್ಲದೆ ಹಲವಾರು ವಿಶೇಷ ಉದ್ದೇಶಗಳಿಗಾಗಿ ನಿಯೋಜಿತವಾಗಿರುವ ಕವಚ ರಕ್ಷಿತ ವಾಹನಗಳೂ ಇವೆ. ಉದಾಹರಣೆ ಸಿಡಿಮದ್ದು ಗುಡಿಸುವ (ಮೈನ್ ಸ್ವೀಪಿಂಗ್) ಟ್ಯಾಂಕುಗಳು.	 ಇವುಗಳಿಗೆ ಒಕ್ಕುಗೋಲುಗಳನ್ನು (ಫ್ಲೇಲ್ಸ್) ಉರುಳೆಗಳನ್ನೂ ಜೋಡಿಸಿದೆ. ನೆಲದ ಮೇಲೆ ಹರಡಿಕೊಂಡಿರಬಹುದಾದ ಸಿಡಿಮದ್ದುಗಳನ್ನು ಈ ಟ್ಯಾಂಕುಗಳು ನಿವಾರಿಸಿ ಯುದ್ಧ ಟ್ಯಾಂಕುಗಳ ಮುನ್ನಡೆಗೆ ಓಣಿಗಳನ್ನು ಒದಗಿಸುತ್ತವೆ. ಬಂಕರುಗಳಲ್ಲಿ ಸುಭದ್ರವಾಗಿ ನೆಲೆಗೊಂಡಿರುವ ಶತ್ರುದಳದ ಮೇಲೆ ಹಿಲಾಲು ಬಿಸಾಡುವ (ಫ್ಲೇಮ್ ತ್ರೋಯಿಂಗ್) ಟ್ಯಾಂಕುಗಳು ಇನ್ನೊಂದು ಬಗೆಯವು. ಹಿಲಾಲುಗಳಲ್ಲಿ ಉಪಯೋಗಿಸುವ ಇಂಧನ 120 ಗಜಗಳಷ್ಟು ವ್ಯಾಪಕವಾದ ಬೆಂಕಿ ನಾಲಗೆಗಳನ್ನು ಚಾಚಬಲ್ಲದು. ಸುಮಾರು ಹತ್ತು ಅಡಿ ವರೆಗೂ ಆಳವಿರುವ ನೀರಿನ ಅಡಚಣೆಗಳನ್ನು ಅಡ್ಡ ದಾಟಲು ಬಳಸುವ ಉಭಯಚರಿ (ಆಂಫಿಬಿಯಸ್, ಡ್ಯೂಪ್ಲೇಡ್ರೈವ್) ಟ್ಯಾಂಕುಗಳೂ ಇವೆ. ಕಡಲತೀರದಲ್ಲಿ ಇಳಿದು ಜಾಗ ಅರಸಲು ಇವು ಉಪಯುಕ್ತವಾಗುವುವು. ಸಂಕ ಹಾಕುವ (ಬ್ರಿಜ್ ಲೇಯರ್) ಟ್ಯಾಂಕುಗಳು ಪೂರ್ವಸಿದ್ಧ ಸೇತುವೆಗಳನ್ನು ತಮ್ಮೊಡನೆ ಒಯ್ದು ಸೈನ್ಯದ ಮುನ್ನಡೆಗೆ ಎದುರಾಗುವ ತೆರಪುಗಳನ್ನೆಲ್ಲ ಮುಚ್ಚಬಲ್ಲವು.

	ಭವಿಷ್ಯ ಪ್ರವೃತ್ತಿಗಳು : ಸೈನ್ಯ ಸಾಮಗ್ರಿಗಳನ್ನು ಪ್ರಧಾನವಾಗಿ ಉತ್ಪಾದಿಸುವ ಸಮಸ್ತ ರಾಷ್ಟ್ರಗಳಲ್ಲಿಯೂ ಟ್ಯಾಂಕು ಆಲೇಖ್ಯಗಳಲ್ಲಿ ನಿರಂತರವಾಗಿ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇಲ್ಲೆಲ್ಲ ಫಿರಂಗಿಯದೇ ಮೇಲುಗೈ. ಪ್ರಥಮ ಟ್ಯಾಂಕಿನಲ್ಲಿದ್ದ ಫಿರಂಗಿ ಪ್ರಾಯಶಃ 35 mm.ದಾಗಿದ್ದರೆ (ನಳಿಗೆಯ ವ್ಯಾಸ 35 ಮಿಲಿಮೀಟರ್ ಎಂದರ್ಥ) ಆಧುನಿಕ ಟ್ಯಾಂಕಿನ ಫಿರಂಗಿ 120 mm.ನದು! ಟ್ಯಾಂಕಿನ ಆಲೇಖ್ಯವನ್ನು ರಚಿಸುವಾಗ ಫಿರಂಗಿ, ವೇಗ ತೂಕ ಮತ್ತು ನಿರ್ವಹಣ ಚಳಕ (ಮನೊವ್ರೆಬಿಲಿಟಿ) ಪರಸ್ಪರ ವಿರುದ್ಧವೆನಿಸುವಂಥ ಆವಶ್ಯಕತೆಗಳನ್ನು ಬೇಡುತ್ತವೆ : ಅಂದರೆ ಒಂದನ್ನು ಪೊರೈಸುವಲ್ಲಿ ಇನ್ನೊಂದನ್ನು ಕೈಬಿಡಬೇಕಾಗುತ್ತದೆ. ತ್ವರಿತ ಹಾಗೂ ನಿಖರ ಹೊಡೆತವನ್ನು (ಶೂಟಿಂಗ್) ಸಾಧಿಸುವ ದಿಶೆಯಲ್ಲಿ ಈಗ ಲೇಸರ್ ದೂಲವನ್ನು ಎಲೆಕ್ಟ್ರಾನಿಕ್ ಸಾಧನಗಳನ್ನೂ ಬಳಸುತ್ತಿದ್ದಾರೆ ರಾತ್ರಿ ಸಂಚಾರವನ್ನು ಸುಲಭಗೊಳಿಸಲು ಅತಿರಕ್ತ ಕಿರಣಗಳ ಉಪಯೋಗವನ್ನು ಪಡೆದುಕೊಳ್ಳಲಾಗುತ್ತಿದೆ. ಟ್ಯಾಂಕಿನ ನಾಯಕನಿಗೆ ಸುತ್ತಲಿನ ವ್ಯಾಪಕ ದೃಶ್ಯ ದೊರೆಯುವುದನ್ನು ಸಾಧ್ಯವಾಗಿಸಲು ಪ್ರಯತ್ನಗಳು ಮುಂದುವರಿದಿವೆ. ಈಗಿರುವಂತೆ ಟ್ಯಾಂಕಿನ ಗಾತ್ರ ಸಾಕಷ್ಟು ದೊಡ್ಡದಾಗಿರುವುದರಿಂದ ರಣಾಂಗಣದಲ್ಲಿ ಇದು ಎದ್ದುಕಾಣುತ್ತದೆ. ಇದನ್ನು ನಿವಾರಿಸಬೇಕಾದರೆ ಟ್ಯಾಂಕಿನ ಗಾತ್ರವನ್ನು ಅದರ ಪ್ರಧಾನ ಉದ್ದೇಶ ಹಾಗೂ ಮೌಲ್ಯಕ್ಕೆ ಊನ ಬಾರದಂತೆ ಸಣ್ಣದಾಗಿ ಮಾಡಬೇಕು. ಈ ದಿಶೆಯಲ್ಲಿ ಕೂಡ ಆಲೇಖ್ಯಕಾರರು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

	ನ್ಯೂಕ್ಲಿಯಾತ್ಮಕ ಕದನದ ಈ ಯುಗದಲ್ಲಿ ಟ್ಯಾಂಕಿಗೆ ಯುದ್ಧಾಯುಧವಾಗಿ ಏನಾದರೂ ಭವಿಷ್ಯವಿದೆಯೇ ಎಂದು ಸಂದೇಹ ಮೂಡಬಹುದು. ವಾಸ್ತವವಾಗಿ ನ್ಯೂಕ್ಲಿಯಾತ್ಮಕ ಆಸ್ಫೋಟನೆಯ ಪರಿಣಾಮಗಳಾದ ಧೂಳೀಪತನದ (ಫಾಲ್ ಔಟ್). ವಿಕಿರಣತೆ (ರೇಡಿಯೇಷನ್) ಮುಂತಾದವುಗಳ ವಿರುದ್ಧ ರಕ್ಷಣೆ ಒದಗಿಸುವ ಒಂದು ವಾಹನವೆಂದರೆ ಅದು ಟ್ಯಾಂಕೇ. ಅಲ್ಲದೆ ಸೈನ್ಯಗಳ ಶೀಘ್ರ ದಟ್ಟೈಸುವಿಕೆ ಹಾಗೂ ವಿತರಣೆಗಳನ್ನು ಟ್ಯಾಂಕುಗಳು ಚಾಕಚಕ್ಯದಿಂದ ನಿರ್ವಹಿಸಬಲ್ಲವು. ನ್ಯೂಕ್ಲಿಯಾತ್ಮಕ ಕದನ ತಂತ್ರದಲ್ಲಿ ಇದು ಮುಖ್ಯವಾದದ್ದು. ಆದ್ದರಿಂದ ಆಧುನಿಕ ರಣರಂಗದಲ್ಲಿಯೂ ಟ್ಯಾಂಕಿಗೆ ಸ್ಥಾನ ಇದ್ದೇ ಇದೆ.			    (ಎ.ಸಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ